India Women Vs West Indies Women: ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಸೋಲಿನ ನಂತರ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯನ್ನು ಆಡಲು ಸಜ್ಜಾಗಿದೆ. ಡಿಸೆಂಬರ್ 15 ರಿಂದ ಪ್ರಾರಂಭವಾಗುವ ಟಿ20 ಸರಣಿಯು ನವಿ ಮುಂಬೈನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಸೋತಿರುವ ಹರ್ಮನ್ಪ್ರೀತ್ ಪಡೆ ಇದೀಗ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಸಿದ್ಧವಾಗಿದೆ. ಎರಡು ತಂಡಗಳ ನಡುವೆ ಮೊದಲ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದರ ನಂತರ ಉಭಯ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ಸ್ಟಾರ್ ಓಪನರ್ ಶೆಫಾಲಿ ವರ್ಮಾ ಅವರನ್ನು ಎರಡೂ ಸರಣಿಗಳಿಂದಲೂ ಕೈಬಿಡಲಾಗಿದೆ. ಹಾಗೆಯೇ ತಂಡದಲ್ಲಿ ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಉಳಿದಂತೆ ಸರಣಿಯ ವೇಳಾಪಟ್ಟಿ ಹಾಗೂ ನೇರ ಪ್ರಸಾರದ ವಿವರ ಇಂತಿದೆ.