ನವದೆಹಲಿ, ಅಕ್ಟೋಬರ್ 4: ಭಾರತದ ಜಿಡಿಪಿ ತಲಾದಾಯ ಇನ್ನೈದು ವರ್ಷದಲ್ಲಿ ಬಹುತೇಕ ದ್ವಿಗುಣಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದ ರಾಜಧಾನಿ ನಗರಿಯಲ್ಲಿ ನಡೆದ ಕೌಟಿಲ್ಯ ಆರ್ಥಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವೆ, ಮುಂಬರುವ ದಶಕಗಳಲ್ಲಿ ಸರ್ಕಾರದ ರಚನಾತ್ಮಕ ಸುಧಾರಣೆಗಳ ಪರಿಣಾಮವಾಗಿ ಸಾಮಾನ್ಯ ವ್ಯಕ್ತಿಯ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಾಣಬಹುದು ಎಂದಿದ್ದಾರೆ. ಭಾರತ 2,730 ಡಾಲರ್ ತಲಾದಾಯ ಮಟ್ಟ ತಲುಪಲು 75 ವರ್ಷ ಬೇಕಾಯಿತು. ಇನ್ನೈದೇ ವರ್ಷದಲ್ಲಿ ತಲಾದಾಯ ಮತ್ತಷ್ಟು 2,000 ಡಾಲರ್ ಏರಿಕೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದ ಭಾರತ ಕೇವಲ ಐದು ವರ್ಷದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಇದು ಭಾರತ ಸಾಧಿಸಿದ ಆರ್ಥಿಕ ಪ್ರಗತಿಯ ಸಂಕೇತವಾಗಿದೆ. 2,730 ಡಾಲರ್ಗಳ ತಲಾದಾಯ ಮಟ್ಟ ತಲುಪಲು ನಮಗೆ 75 ವರ್ಷ ಬೇಕಾಯಿತು. ಐಎಂಎಫ್ ಅಂದಾಜು ಪ್ರಕಾರ ಮುಂದಿನ ಐದು ವರ್ಷದಲ್ಲಿ ತಲಾದಾಯ 2,000 ಡಾಲರ್ನಷ್ಟು ಏರಲಿದೆ. ಮುಂಬರುವ ದಶಕ ಭಾರತದ ಯುಗವಾಗಲಿದೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.