ಹಸಿರ ಆಲಯ, ನಿಸರ್ಗ ಮಾತೆಯ ಸ್ವರ್ಗ, ಅನನ್ಯ ಕಾಡು ಪ್ರಾಣಿಗಳ ಆವಾಸ ಸ್ಥಾನ, ನಿತ್ಯ ನಿರ್ಮಲ ಪರಿಸರದೋಕುಳಿಯಲ್ಲಿ ಮಿಂದೇಳುವ ಮೃಗಗಳು, ಇಂತಹುದೊಂದು ಅಪರೂಪದ ಅಮೋಘ ಸಸ್ಯ ಸಂಪತ್ತಿನ ಖಣಿ ಇರುವುದು ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷತ ಅರಣ್ಯ ಪ್ರದೇಶದಲ್ಲಿ. ಈ ಪ್ರದೇಶದಲ್ಲಿ ಪ್ರಾಣಿಗಳ ಸಂತತಿ ಹೆಚ್ಚಳವಾಗುತ್ತಿದ್ದು, ಸಂತಸ ಮೂಡಿಸಿದೆ.ಚಿಕ್ಕಮಗಳೂರು, ಅಕ್ಟೋಬರ್ 04: ಬೆಳ್ಳಿ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿರೋ ಚಿಕ್ಕಮಗಳೂರಿನ (Chikkamagaluru) ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bhadra tiger reserve forest) ವರ್ಷದಿಂದ ವರ್ಷಕ್ಕೆ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ, ಆನೆ ಸೇರಿದಂತೆ ಕಾಡು ಪ್ರಾಣಿಗಳ ಸಂತತಿ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಪ್ರಾಣಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಭದ್ರಾ ಹುಲಿ ಸಂರಕ್ಷಿತಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಅಭಯಾರಣ್ಯ ಬೆಟ್ಟಗಳಿಂದ ಮತ್ತು ಕಡಿದಾದ ಇಳಿಜಾರಿನಿಂದ ಸುತ್ತುವರೆದಿದ್ದು ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಗಂಗೆಗಿರಿ ಮತ್ತು ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಗಳ ಅಪರೂಪದ ನೋಟವಿದ್ದು, ಒಟ್ಟು 499 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸಾವಿರಾರು ಪ್ರಾಣಿಗಳಿಗೆ ಆಶ್ರಯ ನೀಡಿದೆ.
ಈ ಪ್ರದೇಶಕ್ಕೆ 1974ರಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಭದ್ರ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿ 50 ವರ್ಷಗಳಾಗಿವೆ. ನಂತರ, ಇದೇ ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ 1998ರ ಡಿಸೆಂಬರ್ 23ರಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಅರಣ್ಯ ಸಂಪತ್ತು ಮತ್ತು ಕಾಡುಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.